|| ಶ್ರೀದತ್ತ ||
ಜಗನ್ನಾಟಕಸೂತ್ರಧಾರಿಯಾದ ಭಗವಂತ ತನ್ನ ಲೀಲಾವಿನೋದವಾದ ಈ ಸೃಷ್ಟಿಯನ್ನು ಸುಸೂತ್ರವಾಗಿ ನಡೆಸಲು ಅದೆಷ್ಟೋ ಬಾರಿ ಅವತಾರಗಳನ್ನು ಎತ್ತಿ ಬಂದಿರುತ್ತಾನೆ. ಅವನೇ ಹೇಳುವಂತೆ - “ಕಲೌ ಅಷ್ಟೋತ್ತರಶತಾನಿ ಅವತಾರಾಣಿ ಭವಂತಿ, ಕಲಿಯುಗದಲ್ಲಿ ತಾನು ೧೦೮ ಬಾರಿ ಅವತರಿಸುತ್ತೇನೆ,” ಎಂಬುದು ಆತನ ಆಶ್ವಾಸನೆ.
ಈ ಎಲ್ಲ ಅವತಾರಗಳ ಮೂಲ ಒಬ್ಬನೇ ಆದರೂ ಆತ ತೋರಿ ಬಂದ ರೀತಿಗಳು ಮಾತ್ರ ವಿಭಿನ್ನ ಹಾಗೂ ವಿಶಿಷ್ಟ. ಕಲಿಯುಗದಲ್ಲಿ ಬಂದ ಮೊದಲ ಪೂರ್ಣಾವತಾರವಾದ ಶ್ರೀಪಾದ ಶ್ರೀವಲ್ಲಭರು, ಯತಿಕುಲಶಿರೋಮಣಿಯಾದ ನರಸಿಂಹ ಸರಸ್ವತಿಗಳು, ಪುರಾಣಪುರುಷೋತ್ತಮರಾದ ಅಕ್ಕಲಕೋಟ ಸ್ವಾಮಿ ಸಮರ್ಥರು, ಸಾಈನಾಥರು ಹಾಗೂ ಇಂತಹ ಅದೆಷ್ಟೋ ಮಹಾತ್ಮರುಗಳು ಕಾಲಕಾಲಕ್ಕೆ ಅವತರಿಸಿ ಸೃಷ್ಟಿಯಲ್ಲಿ ಧರ್ಮಸಂಸ್ಥಾಪನೆಯನ್ನು ಮಾಡಿರುತ್ತಾರೆ. ಇಂತಹ ಅವತಾರೀ ಪುರುಷಗಣದ ಮುಕುಟಮಣಿ ಭಗವಾನ್ ಸದ್ಗುರು ಶ್ರೀ ಸುಬ್ರಾಯ ಮಹಾರಾಜರು.
ಭಗವಾನ್ ಶ್ರೀಧರರು, ಬಾಲ ಸುಬ್ರಾಯರನ್ನು ಗುರುತಿಸುತ್ತಾ ಉದ್ಗಾರ ಎತ್ತಿದ್ದು - “ದೇವಕಾರ್ಯಾರ್ಥವಾಗಿ ಆಗಮಿಸಿದ ಅವಧೂತಾ” ಎಂದು. ಶ್ರೀ ಶ್ರೀಧರರೇ ಹೇಳಿದಂತೆ ದೇವತೆಗಳು ಸುಬ್ರಾಯ ಭಗವಂತನ್ನು ಮೊದಲಿನಿಂದಲೇ ಸ್ತುತಿಸಿದ್ದು-
ಏಕ ಏವ ಪರಬ್ರಹ್ಮ ಪರಮಾತ್ಮಾ ದಿಗಂಬರಃ |
ಸ್ವಯಮೇವ ಗುರುಃ ಸಾಕ್ಷಾತ್ ಸುಬ್ರಾಯಃ ಪಾತು ನಃ ಸದಾ ||
ಎಂದು.ಜಗತ್ತಿನ ಸಮಸ್ತ ಚರಾಚರಗಳ ಮುಂಬರುವಿಕೆಯನ್ನು ಮೊದಲೇ ಬರೆದಿಡುವ ನಾಡೀಗ್ರಂಥಗಳಲ್ಲಿ ಒಂದಾದ “ಚಾರು ನಾಡೀಗ್ರಂಥ”ವು ಭಗವಾನ್ ಸುಬ್ರಾಯರನ್ನು ಸಂಬೋಧಿಸಿದ್ದು - “ಶುಭರಾಯ”ನೆಂದು. ಲೋಕಕ್ಕೆಲ್ಲ ಶುಭವನ್ನು ತರಲೋಸುಗ ಪರಮಾತ್ಮನು “ಶುಭರಾಯ” (ಸುಬ್ರಾಯ)ನಾಗಿ ಬಂದ ಬಗೆಯೇ ಒಂದು ಪರಮಾದ್ಭುತ.
ಇಂತಹ ಮಹಾವತಾರಿ ಸದ್ಗುರು ಸುಬ್ರಾಯರ ಜೀವನಲೀಲಾಮೃತವನ್ನು ಗುರುಭಕ್ತರಿಗೆ ಕಿಂಚಿತ್ ಉಣಬಡಿಸುವ ಸೇವೆಯನ್ನು ಈ ಜಾಲತಾಣದ ಮೂಲಕ ಮಾಡಲಾಗುವುದು. ಗುರುಭಕ್ತರು ಇಲ್ಲಿರುವ ವಿಷಯವಸ್ತುವಿನ (ಗುರುದೇವನ ದಿವ್ಯವಾದ ಪ್ರವಚನಗಳ, ಗುರುದೇವನು ಬರೆದ ಪುಸ್ತಕಗಳ, ಗುರುಗಳ ವಿಡಿಯೋಗಳ, ಸದ್ಗುರುವಿನ ಫೋಟೋಗಳ) ಉಪಯೋಗವನ್ನು ತೆಗೆದುಕೊಂಡು, ಶ್ರೀಗುರುತತ್ತ್ವವನ್ನು ಇನ್ನಷ್ಟು ಪ್ರೀತಿಸುವಂತಾಗಿ, ಗುರುಗಳ ಕೃಪೆಗೆ ಪಾತ್ರರಾಗಿ ಎಂದು ಕೋರಿಕೆ. ಈ ಜಾಲತಾಣದ “ಬ್ಲಾಗ್” ಅಂಕಣದಲ್ಲಿ ಕಾಲಕಾಲಕ್ಕೆ ಗುರುಗಳ ಕುರಿತಾಗಿ, ಗುರುಗಳ ಪವಿತ್ರ ಆಶ್ರಮವಾದ “ಸಿದ್ಧವನ”ದ ಬಗ್ಗೆ ಲೇಖನಗಳನ್ನು ಪ್ರಕಟಿಸಲಾಗುವುದು. ಆಸಕ್ತರು ಅವುಗಳನ್ನೂ ಓದಬಹುದು. ಸದ್ಗುರು ಭಗವಂತನು ಎಲ್ಲರಿಗೂ ಮಂಗಳವನ್ನು ಉಂಟುಮಾಡಲಿ.
|| ಗುರುದೇವ ದತ್ತ ||