Shri Subraya Maharaja

ದುರ್ಲಭಂ ತ್ರಯಮೇವೈತದ್ದೈವಾನುಗ್ರಹ ಹೇತುಕಮ್ ।।
ಮನುಷ್ಯತ್ವಂ ಮುಮುಕ್ಷತ್ವಂ ಮಹಾಪುರುಷ ಸಂಶ್ರಯಃ ।।

ದುರ್ಲಭವಾದ ಈ ಮಾನವ ಜನ್ಮ ಸಿಕ್ಕಿದಾಗ ವ್ಯರ್ಥವಾಗಿ ಕಳೆಯಬಾರದು. ದಿವಸ ಕಳೆಯುತ್ತಲಿರುತ್ತದೆ. ಇದುವರೆಗೂ ಸಂಸಾರದಲ್ಲಿ ಯಾರೂ ಸುಖ ಕಂಡವರಿಲ್ಲ. ನಾಳೆ ಸಿಗುತ್ತದೆ, ನಾಳೆ ಸಿಗುತ್ತದೆ ಎನ್ನುತ್ತಲೇ ಎಲ್ಲರೂ ಹೋದರು. ಇಲ್ಲಿ ಇದ್ದರೆ ತಾನೇ ಸುಖ ಸಿಗುವುದು. ಎಲ್ಲರೂ ಸುಮ್ಮನೆ ಹೊತ್ತು ಕಳೆಯುತ್ತಲಿರುತ್ತಾರೆ. ನಾವು ಅದಕ್ಕೆ ಅಪವಾದವಾಗಿರಬೇಕು. ಜನರು ಒಪ್ಪುತ್ತಾರೋ ಬಿಡುತ್ತಾರೋ, ನಾವು ಮಾತ್ರ ಗುರುಗಳು ಹೇಳಿದ ಮಾರ್ಗದಲ್ಲಿ ನಡೆದು ಸಾಧಿಸಬೇಕು. ಆಗ ತಿರಸ್ಕರಿಸಿದ ಜನರೇ ನಮ್ಮನ್ನು ಗೌರವಿಸುತ್ತಾರೆ. ಹಾಗಂತ ನಾವು ಗೌರವಕ್ಕೆಂದು ಸಾಧನೆ ಮಾಡುವುದಲ್ಲ.

ಹಿಂದಿನ ಎಲ್ಲ ಮಹಾತ್ಮರನ್ನು ನೋಡಿ. ಸಮಾಜ ಅವರನ್ನು ಗೌರವಿಸಿತೋ ಇಲ್ಲವೋ. ಅವರು ಮಾತ್ರ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಗುರು ತೋರಿದ ಮಾರ್ಗದಲ್ಲಿ ಹೋಗಿ ಸಾಧಿಸಿ ತೋರಿಸಿದ್ದಾರೆ. ಇಲ್ಲಿ ಶ್ರದ್ಧೆ ವಿಶ್ವಾಸದ ಜೊತೆಗೆ ತಾಳ್ಮೆ ಬಹಳ ಮುಖ್ಯ.

ಗುರುವಿಗೆ ಶಿಷ್ಯನಿಂದ ಆಗಬೇಕಾದದ್ದು ಏನೂ ಇಲ್ಲ. ಆದರೆ ಶಿಷ್ಯನಿಗೆ ಗುರುವಿನಿಂದ ಆಗಬೇಕಾಗಿದ್ದು ಬಹಳ ಇದೆ. ಒಬ್ಬ ಪೂರ್ಣ ಒಪ್ಪಿಸಿಕೊಂಡ ಶಿಷ್ಯನನ್ನು ತನ್ನನ್ನೇ ಮಾಡುತ್ತಾನೆ ಅಂದ ಮೇಲೆ ಇನ್ನೇನು ಬೇಕು ಶಿಷ್ಯನಿಗೆ. ಗುರುಕಾರುಣ್ಯ ಯಾರಿಗೂ ಅರ್ಥವಾಗುವುದಿಲ್ಲ. ಜ್ಞಾನ ಹೊಂದಿದ ಮೇಲೆ ಮಾತ್ರ ಅದು ಪೂರ್ಣವಾಗಿ ಅರ್ಥವಾಗುತ್ತದೆ.

ಸಾಧನೆ, ಸಾಧನೆ ಅಂತ ಬಹಳ ಜನ ಯಾವ ಯಾವುದೋ ಸಾಧನೆಗಳನ್ನು ಮಾಡುತ್ತಾರೆ. ಆದರೆ ಹಾಗೆಲ್ಲ ಪೂರ್ಣ ಸಮಾಧಾನ ಸಿಗುವುದಿಲ್ಲ. ಗುರುವಿನ ಅನುಗ್ರಹ ಇಲ್ಲದೆ ಯಾರೂ ಪೂರ್ಣತ್ವವನ್ನು ಹೊಂದಲು ಸಾಧ್ಯವಿಲ್ಲ. ನೀವು ಮಾಡಬೇಕಾದ್ದಿಷ್ಟೇ – ಗುರುವು ನಿಮ್ಮನ್ನು ಸ್ವೀಕರಿಸುವ ದಿಕ್ಕಿನಲ್ಲಿ ಪ್ರಯತ್ನ ಮಾಡುವುದು. “ಯಮೇವೈಷ ವೃಣುತೇ ತೇನ ಲಭ್ಯಃ”. ಗುರುವೇ ನಿಮ್ಮನ್ನು ಆಯ್ಕೆ ಮಾಡಿಕೊಂಡಾಗ ಮಾತ್ರ ನಾವು ಜ್ಞಾನವನ್ನು ಹೊಂದುತ್ತೇವೆ. ಇಲ್ಲದಿದ್ದರೆ ಎಷ್ಟು ಪ್ರಯತ್ನ ಮಾಡಿದರೂ, ಎಷ್ಟು ಜನ್ಮ ಕಳೆದರೂ ಸಿಗುವುದಿಲ್ಲ.

ಗುರುವನ್ನು ಪ್ರೀತಿ ಮಾಡುವುದು ಬಹಳ ಸುಲಭ. ಜ್ಞಾನವನ್ನೇ ಹೊಂದಬೇಕೆನ್ನುವವನಿಗೆ ಇದರಷ್ಟು ಸುಲಭ ಮಾರ್ಗ ಬೇರೊಂದಿಲ್ಲ. ಎಲ್ಲರೂ ಎಷ್ಟು ಸುತ್ತು ಹಾಕಿದರೂ ಕೊನೆಗೆ ಗುರುಕೃಪೆಯಿಂದಲೇ ಮುಕ್ತಿಯನ್ನು ಪಡೆಯಬೇಕು.

ಗುರು ಕಷ್ಟವಾದದ್ದನ್ನು ಏನೂ ಹೇಳುವುದಿಲ್ಲ. ಶಿಷ್ಯರ ಯೋಗ್ಯತೆಯನ್ನು ಅಳೆಯಲು ಆಗಾಗ ಪರೀಕ್ಷೆ ಮಾಡುತ್ತಿರುತ್ತಾನೆ. ಸ್ವಲ್ಪ ತಾಳ್ಮೆಯಿಂದ ಇದ್ದರೆ ಶಿಷ್ಯ ಗುರುವಿನ ಪರೀಕ್ಷೆಯಲ್ಲಿ ಪಾಸಾಗುತ್ತಾನೆ. ಎಲ್ಲವನ್ನೂ ನಿಯಂತ್ರಿಸುವ ಗುರುವಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಆದರೆ ಲೋಕ ಗುರುವನ್ನು ಅರ್ಥ ಮಾಡಿಕೊಳ್ಳುವುದಿಲ್ಲ.
“ಗುರುವೇ ನಿನಗೆ ಹೇಗೆ ಇಷ್ಟವೋ ಹಾಗೆ ಇರಿಸು”, ಎಂದು ಹೇಳುವ ಶಿಷ್ಯ ಗುರುವಿಗೆ ಇಷ್ಟವಾಗುತ್ತಾನೆ. ತಾಯಿಗೆ ಮಗುವಿನ ಕುರಿತು ತಿಳಿದಿರುವಂತೆ ನಿಮಗೆ ಯಾವುದು ಹಿತ ಎಂಬುದು ನಿಮಗಿಂತ ಗುರುವಿಗೆ ಚೆನ್ನಾಗಿ ತಿಳಿದಿರುತ್ತದೆ.

ವೇದ ಶಾಸ್ತ್ರಾದಿಗಳಲ್ಲಿ ಬಹಳಷ್ಟು ಸಾಧನಾಮಾರ್ಗಗಳು ಹೇಳಲ್ಪಟ್ಟಿವೆ. ಆದರೆ ಎಲ್ಲವೂ, ಎಲ್ಲರಿಗೂ ಸೂಕ್ತವಾಗುವುದಿಲ್ಲ. ಚಿಕಿತ್ಸಾಲಯದಲ್ಲಿ ನಾನಾ ರೋಗಿಗಳಿಗೆ ಅನುಕೂಲವಾಗುವ ಸಾಕಷ್ಟು ಔಷಧಗಳು ಇದ್ದರೂ ವೈದ್ಯರೇ ಇಂಥವನಿಗೆ ಈ ಔಷಧ ಎಂದು ಕೊಟ್ಟಾಗ, ಅದನ್ನು ರೋಗಿ ವಿಶ್ವಾಸದಿಂದ ಸೇವಿಸಿದಾಗ ಮಾತ್ರ ಪ್ರಯೋಜನವುಂಟಾಗುತ್ತದೆ. ಹಾಗೆ ಅವರವರ ಕರ್ಮ ಕಳೆಯಲು ಗುರು ಹೇಳಿದ ಆ ಮಾರ್ಗವನ್ನು ಶ್ರೇಷ್ಠ-ಕನಿಷ್ಠ, ಸಣ್ಣ-ದೊಡ್ಡ, ಶಾಸ್ತ್ರೀಯ-ಅಶಾಸ್ತ್ರೀಯ ಇತ್ಯಾದಿಯಾಗಿ ವಿಮರ್ಶೆ ಮಾಡದೆ ಪ್ರೀತಿಯಿಂದ ಸ್ವೀಕರಿಸಿದಾಗ ಶಿಷ್ಯ ಗೆಲ್ಲುತ್ತಾನೆ.

ಇಂತಹ ಉಪದೇಶಗಳನ್ನು ಅದೆಷ್ಟೋ ನೀಡುತ್ತಾ, ಇನ್ನಿಲ್ಲದಂತೆ ಶಿಷ್ಯರನ್ನು ಪ್ರೀತಿ ಮಾಡುತ್ತಾ ಕಾರುಣ್ಯ ಮಳೆಯನ್ನೇ ಸುರಿಸುತ್ತ, ಶರೀರದಲ್ಲಿ ಒಂದು ಅತ್ಯಲ್ಪ ಅವಕಾಶವೂ ಇಲ್ಲದಂತೆ ಶಿಷ್ಯರ ಕರ್ಮಗಳನ್ನು ತಾನು ತೆಗೆದುಕೊಂಡು ನೋವನ್ನು ಅನುಭವಿಸುತ್ತಿದ್ದರೂ ಸದಾ ಸಂತೋಷವನ್ನೇ ಹಂಚುತ್ತಾ, ಶಿಷ್ಯರು ಕೈ ಕೊಡವಿಕೊಂಡು ಓಡಿ ಹೋದರೂ ತಾನು ಮಾತ್ರ ತಾಯಿ ಮಗುವಿನ ಹಿಂದೆ ಹೋಗಿ ಕೈಹಿಡಿದೆಳೆದು ತಬ್ಬಿ ಮಡಿಲಲ್ಲಿ ಕುಳ್ಳಿರಿಸಿಕೊಂಡು ಬಾಯಲ್ಲಿ ತುತ್ತನ್ನಿರಿಸುವಂತೆ ಜ್ಞಾನಾಮೃತವನ್ನು ಉಣಬಡಿಸಿದರಲ್ಲ ಆ ಸದ್ಗುರು ಸುಬ್ರಾಯರು! ಅವರನ್ನು ಏನೆಂದು ಹೇಳೋಣ? ಬ್ರಹ್ಮವೋ? ಭೂಮವೋ? ಸತ್ತೋ? ಚಿತ್ತೋ? ಆನಂದವೋ? ಅನಂತನೋ? ಭಗವಂತನೋ? ಪರಮಾತ್ಮನೋ? ನಾರಾಯಣನೋ? ವಾಸುದೇವನೋ? ರಾಮನೋ? ಕೃಷ್ಣನೋ? ದೇವನೋ? ದೇವಿಯೋ? ಸಂಸಾರಿಯೋ? ಸಂನ್ಯಾಸಿಯೋ? ಎಲ್ಲವೂ ಅವನೇ ಆಗಿರುವಾಗ ಮಾತು ಮೂಕವಾಗುತ್ತದೆ, ಕಣ್ಣು ಮಂಜಾಗುತ್ತದೆ.

ಅದೆಂತಹ ಪ್ರೀತಿ, ಅದೆಂತಹ ನಗು, ಅದೆಂತಹ ಕಾರುಣ್ಯ. ಗಹನವಾದ ವೇದಾಂತ ತತ್ತ್ವಗಳನ್ನೂ ಕೂಡ ಎಂತಹ ಮಂದನಿಗೂ ತಿಳಿಯುವಂತೆ ಬೋಧಿಸುವ ಅವರ ಪರಿ ಅಸದೃಶ. ಅವರಿಗೆ ಅವರೇ ಸಾಟಿ. ಆ ತತ್ತ್ವವೇ ಅವರಾದಾಗ ಮಾತ್ರ ಅದು ಸಾಧ್ಯ. ಅದು ಸಹಜತೆ. ಅದು ಪೂರ್ಣತೆ. ಅವರ ಮಾತಿನಲ್ಲಿ ಅದೆಂತಹ ಶಕ್ತಿ. ಕೇಳಿದ ಮೇಲೆ ಮತ್ತಾರ ಮಾತೂ ರುಚಿಸದು.

ಅವರ ಒಂದೊಂದು ನಡೆಯೂ ನುಡಿಯೂ ಅದ್ಭುತ ಅದ್ಭುತ ! ತನಗೆ ಗುರುವಿನ ಆಳ-ಅಗಲ ಗೊತ್ತಿಲ್ಲ. ತಾನು ಗುರು ಹೇಳಿದಂತೆ ನಡೆಯುತ್ತೇನೆ ಎಂಬ ಭರವಸೆಯೂ ಇಲ್ಲ. ಆದರೂ ತನ್ನ ಗುರು ಮಹಾನ್. ಇದು ಎಲ್ಲ ಶಿಷ್ಯರ ಅಂತರAಗದ ಧ್ವನಿ. ಹೀಗೆ ಇಂತಹ ಶಿಷ್ಯನಲ್ಲೂ ಇಂತಹ ಧ್ವನಿಯನ್ನು ಒಡಮೂಡಿಸಿದ್ದಾರೆಂದರೆ ಅಂತಹ ಗುರುವಿನ ಮಹಿಮೆಯನ್ನು ಏನೆಂದು ವರ್ಣಿಸೋಣ?

ಅವರು ಆಡಿದರು, ಆಡಿಸಿದರು, ಹಾಡಿಸಿದರು, ಕುಣಿಸಿದರು, ಕೂರಿಸಿದರು, ಓದಿಸಿದರು, ಬರೆಸಿದರು, ಜಪ ಮಾಡಿಸಿದರು, ಹೋಮ ಮಾಡಿಸಿದರು, ದೇವ-ಪಿತೃ-ಗ್ರಹಗಳ ಬಲ ವರ್ಧಿಸಿದರು. ದುಷ್ಟಗ್ರಹ ನಿಗ್ರಹಿಸಿದರು, ಗುಡಿ ಕಟ್ಟಿಸಿದರು, ಒಂದೇ ಎರಡೇ, ಎಣಿಸಲಸಾಧ್ಯ ಅವರ ಕಾರ್ಯ. ಎಲ್ಲವೂ ತಾನೇ ಆಗಿ, ಎಲ್ಲೆಡೆ ತುಂಬಿ, ಇನ್ನೊಂದೆಂಬವುಗಳನ್ನು ಮೆಟ್ಟಿ ನಿಂತ ಆನಂದದ ಘಟ್ಟಿಯಾದ ಆ ಗುರುದೇವನಿಗೆ ಏತರ ಕೊರತೆ. ಕೇವಲ ತಮ್ಮ ಶಿಷ್ಯರ ಉದ್ಧಾರಕ್ಕಾಗಿ ತಮ್ಮನ್ನು ತಾವು ಸವೆಸಿದರು.

ಓ ಬಂಧುಗಳೇ ಬನ್ನಿ. ನಮ್ಮ ರಾಗ ದ್ವೇಷಾದಿಗಳನ್ನು ಬದಿಗೊತ್ತಿ, ಇಳೆಯಲ್ಲಿ ಅಳಿಯುವ ಮೊದಲು ತಮ್ಮ ಕಳೆಯನ್ನೆಲ್ಲ ಕಳೆಯಲು ಕೈಚಾಚಿ ನಿಂತ, ಆ ಹರಿ-ಹರ-ಬ್ರಹ್ಮರೇ ಒಂದಾಗಿ ಬಂದ ಸದ್ಗುರು ಸುಬ್ರಾಯರ ಪದದಲ್ಲಿ ಒಂದಾಗಿ ಸೇರೋಣ. ಅವರನ್ನು ಭಜಿಸೋಣ. ಪ್ರೀತಿಯ ಗಳಿಸೋಣ.

ತಾನೇ ತಾನಾಗಿ ಒಬ್ಬನೇ ಇದ್ದ, ಇನ್ನಿಲ್ಲದಂತೆ ವ್ಯಾಪಕನಾದ, ಪರಮಜ್ಞಾನದ ನಿಧಿಯಾದ, ಉಪಾಧಿಗಳನ್ನೆಲ್ಲ ಕೊಡವಿ ನಿಂತ, ಶಿಷ್ಯೋದ್ಧಾರಕ್ಕೆ ಸ್ವಯಂ ಗುರುವಾಗಿ ತೋರಿಕೊಂಡ, ಮಂಗಳಮಯ ಕಾಂತಿಯಿಂದ ಪ್ರಕಾಶಿಸುವ ಸದ್ಗುರು ಸುಬ್ರಾಯರಿಗೆ ನಮೋನಮಃ.